ಮಹಾನಾರಾಯಣೋಪನಿಷತ್
ಕೃಷ್ಣಯಜುರ್ವೇದಕ್ಕೆ ಸಂಬಂಧಿಸಿದ ಈ ಉಪನಿಷತ್ತು ಬಲು ದೀರ್ಘವಾಗಿದೆ. ನಾರಾಯಣನೇ ಈ ಉಪನಿಷತ್ತಿನ ಅದ್ವಿತೀಯ ಪರಮಸತ್ಯ. ಆತನ ಮೇಲಿನ ಜ್ಞಾನ, ಪರಮಭಕ್ತಿ ಮುಕ್ತಿಗೆ ದಾರಿ ಎಂದು ಇದರಲ್ಲಿ ಹೇಳಿದೆ. ಧಾರ್ಮಿಕ ಸಂಸ್ಕಾರಾದಿಗಳಲ್ಲಿ ಉಚ್ಚರಿಸುವ ಶ್ಲೋಕಗಳಲ್ಲಿ ಬಹಳ ಪಾಲು ಈ ಉಪನಿಷತ್ತಿನವೇ  ಆಗಿವೆ. 

	ಇದರಲ್ಲಿ ಎಂಬತ್ತು ಬೇರೆ ಬೇರೆ ಭಾಗಗಳಿವೆ. ಅವುಗಳ ಪೈಕಿ ಮೊದಲನೆಯದು ಅತಿ ದೊಡ್ಡ ಭಾಗ. ಆದರಲ್ಲಿ 70 ಮಂತ್ರಗಳಿವೆ; ಇನ್ನುಳಿದವು ತೀರ ಚಿಕ್ಕವು. 

	ಪರಮೇಶ್ವರ ಸಕಲಜೀವಿಗಳಲ್ಲಿ ಕರ್ತ ಹಾಗೂ ಭೋಕ್ತøವಾಗಿಯೂ ಅಂತರ್ಯಾಮಿಯಾಗಿಯೂ ಆಧಾರ ಹಾಗೂ ಮೂಲಕಾರಣನಾಗಿಯೂ ಇದ್ದಾನೆ. ಪ್ರಕೃತಿಯ ಕ್ರಿಯಾ ಶಕ್ತಿಗಳೂ ಅದರ ದೇವತೆಗಳೂ ಪರಮೇಶ್ವರನಿಂದ ತಮ್ಮ ಅಸ್ತಿತ್ವ ಹೊಂದಿವೆ. ಪ್ರಕೃತಿ, ಪಂಚಮಹಾಭೂತಗಳು, ಸಸ್ಯವರ್ಗ, ಪ್ರಾಣಿವರ್ಗ ಮತ್ತು ಮನುಷ್ಯರು-ಈ ರೂಪದಲ್ಲಿ ಪರಮೇಶ್ವರ ಮೈದಳೆಯುತ್ತಾನೆ. ಹೀಗೆ ಪರಿಣಾಮ ಹೊಂದಿದರೂ ಆತನನ್ನು ಮಹಿಮರಿಗಿಂತ ಮಹಿಮೆ, ಅಣೋರಣೀಯ ಎಂದು ಹೇಳಲಾಗಿದೆ. ಪರಮಾತ್ಮ ಬಹುರೂಪಿ ಜಗತ್ತಾಗಿ ಪರಿಣಮಿಸಿದ್ದರೂ ಆತ ಮಾತ್ರ  ಏಕ ಹಾಗೂ ಅವಿಚ್ಫಿನ್ನವಾಗಿ ಉಳಿಯುತ್ತಾನೆ. ಆತ ತಮಸ್ಸು ಮುಂತಾದ ಕಳಂಕಗಳಿಂದ ಅತೀತ, ಅವನನ್ನು ಕಣ್ಣಿನಿಂದ ನೋಡಲಾಗುವುದಿಲ್ಲ; ಮನಸ್ಸಿನಿಂದ ಅರಿಯಲಾಗುವುದಿಲ್ಲ. ಪ್ರಪಂಚದಲ್ಲಿ ನಾವು ಕಾಣುವ ವಸ್ತುಗಳು ಆ ದೈವದ ಪ್ರತೀಕಗಳಷ್ಟೆ. ಯೋಗಾಭ್ಯಾಸವನ್ನು ಮುಂದುವರಿಸುವುದರಿಂದ,  ಆತನನ್ನು ಅರಿಯಲು ಸಾಧ್ಯ. ಹೀಗೆ ದೇವರನ್ನು ಸಾಕ್ಪಾತ್ಕರಿಸಿಕೊಂಡವರು ಅಮರರಾಗುತ್ತಾರೆ. ಅವರು ಪುನಃ ಈ ಪ್ರಪಂಚದಲ್ಲಿ ಜನ್ಮ ಎತ್ತುವುದಿಲ್ಲ. ಈ ಅರ್ಥವಿರುವ ಮಂತ್ರಗಳು, ಕೆಲವು ಬದಲಾವಣೆಗಳೊಂದಿಗೆ, ಕಠ ಮತ್ತು ಶ್ವೇತಾಶ್ವತರ ಉಪನಿಷತ್ತುಗಳಲ್ಲಿಯೂ ಕಂಡುಬರುತ್ತವೆ. 

	ಎರಡನೆಯ ಭಾಗದಲ್ಲಿ 7 ಮಂತ್ರಗಳಿವೆ. ಋಗ್ವೇದದಲ್ಲಿ ಅಲ್ಲಲ್ಲಿ ಚದರಿರುವ ದುರ್ಗಾಸೂಕ್ತಾ ಎಂಬ ಪ್ರಸಿದ್ಧ ಮಂತ್ರಗವನ್ನು ಈ ಭಾಗ ಪುನರುಚ್ಚರಿಸುತ್ತದೆ. 

	ಈ  ಉಪನಿಷತ್ತನ್ನು ಯಜ್ಞಿಕ ಉಪನಿಷತ್ ಎಂದೂ ಕರೆಯುತ್ತಾರೆ.  ಏಕೆಂದರೆ ಇಲಿ ಯಜ್ಞಾತ್ಮ ನಾರಾಯಣನೇ ಈ ವೇದಭಾಗವನ್ನು ಅರಗಿಸಿ ಕೊಂಡಿರುವ ದ್ರಷ್ಟಾರ.

	ಒಟ್ಟಿನಲ್ಲಿ ಈ ಉಪನಿಷತ್ತು ಋಗ್ವೇದ ಸೂಕ್ತಗಳಲ್ಲಿ ಅನೇಕವನ್ನು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಪುನರುದ್ಧರಿಸಿ, ನಾರಾಯಣನೇ ಪರಮತತ್ತ್ವವಾದ್ದರಿಂದ ಆತನನ್ನು ಸಾಕ್ಪಾತ್ಕರಿಸಿಕೊಳ್ಳಬೇಕೆಂದು ತಾತ್ಪರ್ಯರೂಪವಾಗಿ ಹೇಳುತ್ತದೆ. ಅಥರ್ವವೇದದ ಒಂದು ಭಾಗವಾಗಿ ಬರುವ ನಾರಾಯಣೋಪನಿಷತ್ತು ಸಹ ನಾರಾಯಣ ಪಾರಮ್ಯವನ್ನು ಹೇಳುತ್ತದೆ. 					
(ಎಸ್.ಎಸ್.ಅರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ